ಕಂಪು ಜಿನಸುಗಳು (ಫ್ಲೇವರಿಂಗ್ಸ್‌):    ಉಪ್ಪು, ಹುಳಿ, ಕಾರ, ಸಿಹಿಗಳಲ್ಲದೆ ಆಹಾರಗಳಿಗೆ ರುಚಿಕಟ್ಟುವುದಕ್ಕಾಗಿ ಬಳಸುವ ಕಂಪು ಅಥವಾ ಪರಿಮಳವನ್ನು ಕೊಡುವ ಕೆಲವು ಗ್ರಂದಿಗೆ ಅಥವಾ ಮಸಾಲೆ ಪದಾರ್ಥಗಳು, (ಫ್ಲೇವರಿಂಗ್ಸ್‌). ಇವುಗಳಲ್ಲಿ ಕೆಲವನ್ನು ಸಾರಿನ ಅಥವಾ ಹುಳಿಯ 
ಪುಡಿಗಳಲ್ಲಿ ಉಪಯೋಗಿಸುವುದರಿಂದ ಈ ಕಂಪುಜಿನಸುಗಳಿಗೆ ಸಂಬಾರ ಜಿನಸುಗಳೆಂದೂ ಹೆಸರುಂಟು. ಮತ್ತೆ ಕೆಲವನ್ನು ಒಗ್ಗರಣೆಗಳಾಗಿಯೂ ಇನ್ನು ಕೆಲವನ್ನು ಹಾಗೆಯೆ ಆಹಾರಗಳಲ್ಲಿಯೂ ಬೆರೆಸುತ್ತಾರೆ. ಕಂಪು ಜಿನಸುಗಳೆಲ್ಲ ಸಸ್ಯಜನಿತವಾದುವು. ಇವನ್ನು ಭಾರತ, 
ಶ್ರೀಲಂಕ, ಮಲೇಷ್ಯ, ಇಂಡೊನೇಷ್ಯ ಇತ್ಯಾದಿ ದೇಶಗಳಲ್ಲಿ ಮಾತ್ರ ಬೆಳೆಯಲಾಗುತ್ತದೆ. ಆದ್ದರಿಂದ ಬಹು ಪುರಾತನ ಕಾಲಗಳಿಂದಲೂ ಈ ದೇಶಗಳಿಂದ ಪಾಶ್ಚಾತ್ಯ ದೇಶಗಳಿಗೆ ಮಸಾಲೆ ಜಿನಸುಗಳ ವ್ಯಾಪಾರ ನಡೆದುಬಂದಿದೆ. ಈ ಜಿನಸುಗಳು ಸಸ್ಯಗಳ ನಾನಾ 
ಭಾಗಗಳಿಂದಲೂ ತಯಾರಾಗುತ್ತವೆ. ಉಪಯೋಗ ದಲ್ಲಿರುವ ಅನೇಕ ಮಸಾಲೆ ಜಿನಸುಗಳಲ್ಲಿ ಮುಖ್ಯವಾದವುಗಳು ಇವು:

ಎಲೆಗಳು-ಕರಿಬೇವು, ಕೊತ್ತಂಬರಿ ಸೊಪ್ಪು, ಪುದಿನ, ಮಜ್ಜಿಗೆ ಸೊಪ್ಪು, ದೊಡ್ಡಪತ್ರೆ ಇತ್ಯಾದಿ. 

ಹೂಗಳು-ಲವಂಗ (ಮೊಗ್ಗು), ಕೇಸರಿ (ಪುಷ್ಪಶಲಾಕೆ), ಮರಾಟ ಮೊಗ್ಗು ಇತ್ಯಾದಿ.

ಫಲಗಳು-ಮೆಣಸು, ಏಲಕ್ಕಿ, ಧನಿಯ, ಬಡಿಸೋಂಪು, ವನಿಲ, ಹಸಿ ಮತ್ತು ಒಣಮೆಣಸಿನಕಾಯಿ, ಮರಗಳ ಹಿಪ್ಪಲಿ, ನಿಂಬೆ ಇತ್ಯಾದಿ.

ಬೀಜಗಳು-ಸಾಸುವೆ, ಮೆಂತ್ಯ, ಜೀರಿಗೆ, ಸಬ್ಬಸಿಗೆ, ಜಾಯಿಕಾಯಿ, ಜಾಪತ್ರಿ ಇತ್ಯಾದಿ.	ತೊಗಟೆಗಳು-ದಾಲ್ಚಿನ್ನಿ ಇತ್ಯಾದಿ.
ಬೇರು, ಗೆಡ್ಡೆ, ಗೆಣಸುಗಳು-ಅರಸಿನ, ಬಜೆ, ಹಸಿ ಮತ್ತು ಒಣಶುಂಠಿ, ಬೆಳ್ಳುಳ್ಳಿ, ಈರುಳ್ಳಿ ಇತ್ಯಾದಿ.

ಇತರ ಭಾಗಗಳು-ಹಿಂಗು (ಇದು ಒಂದು ಗಿಡದ ಅಂಟು ಅಥವಾ ರಾಳ).

ಮೇಲೆ ಹೇಳಿದ ಜಿನಸುಗಳಲ್ಲಿ-ಕೇಸರಿ, ಏಲಕ್ಕಿ, ಲವಂಗ, ಬಡಿಸೋಂಪು, ವನಿಲ, ಜಾಯಿಕಾಯಿ, ಜಾಪತ್ರೆ, ಸಬ್ಬಸಿಗೆ-ಇವನ್ನು ಮುಖ್ಯವಾಗಿ ಲಾಡು, ಮಿಠಾಯಿ, ಐಸ್ಕ್ರಿಮ್, ಕೀರು, ಪಾಯಸ ಇತ್ಯಾದಿ ಸಿಹಿ ಪದಾರ್ಥಗಳಲ್ಲಿಯೂ ತಾಂಬೂಲದಲ್ಲಿಯೂ ಉಪಯೋಗಿಸುತ್ತಾರೆ. 

ಮಿಕ್ಕವುಗಳನ್ನು ಒಗ್ಗರಣೆ, ಸಾಂಬಾರ ಪುಡಿಗಳು, ಹುಳಿ, ಸಾರು, ವಡೆ ಇತ್ಯಾದಿ ಖಾರದ ಪದಾರ್ಥಗಳಲ್ಲಿ ಉಪಯೋಗಿಸುತ್ತಾರೆ. ಶಾಖಾಹಾರದಲ್ಲಿ ಹೇಗೋ ಹಾಗೆ ಮಾಂಸಾಹಾರದಲ್ಲೂ ಇವೆಲ್ಲದರ ಬಳಕೆ ಇದೆ.	(ಎನ್.ಎನ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ